ಉಪನಿಷತ್ತಿನ ಕಥೆಗಳು

ಮಹರ್ಷಿ ಉತತ್ಥ ಅಸುರರೊಂದಿಗೆ ಸುರರ ಸಂಗ್ರಾಮ ಬಿರುಸಿನಿಂದ ಸಾಗಿತ್ತು. ಅಸುರರ ಪೈಕಿ ರಾಹು ಸೂರ್ಯ-ಚಂದ್ರರೀರ್ವರನ್ನೂ ಬಾಣಗಳಿಂದ ತೀವ್ರವಾಗಿ ಗಾಯಗೊಳಿಸಿದ. ಮೂರೂ ಲೋಕಗಳಲ್ಲೂ ಕತ್ತಲು ಕವಿಯಿತು. ಅಸುರರಿಗೆ ಸುರರೆನಿಸಿದ ದೇವತೆಗಳ ಮೇಲೆ ಧಾಳಿ ನಡೆಸಲು ಇನ್ನೂ ಅನುಕೂಲ ಆಯಿತು. ದೇವತೆಗಳೆಲ್ಲರೂ ದಿಗ್ಭ್ರಾಂತರಾಗಿ ಅತ್ರಿ ಮಹರ್ಷಿಗಳ ಬಳಿಗೆ ಬಂದರು. ಅವರಲ್ಲಿ ಮೊರೆ ಇಟ್ಟರು:
“ಮಹರ್ಷಿಗಳೇ, ಸೂರ್ಯ-ಚಂದ್ರರು ಅಸುರರಿಂದ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಮೂರೂ ಲೋಕಗಳಲ್ಲೂ ಕತ್ತಲು ಕವಿದೆದೆ. ನಮ್ಮನ್ನು ಕಂಡರೆ ಸಾಕು, ಅಸುರರು ಬೆಚ್ಚುವಂತೆ ಸದೆ ಬಡಿಯುತ್ತಿದ್ದಾರೆ. ದಯವಿಟ್ಟು ನಮ್ಮನ್ನು ಕಾಪಾಡಿ.
ದಯಾರ್ದ್ರದೃಷ್ಟಿಯಿಂದ ದೇವತೆಗಳ ಕಡೆ ನೋಡುತ್ತಾ ಅತ್ರಿ ಮಹರ್ಷಿ ಕೇಳಿದರು: “ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಆಗಬೇಕು?”
ದೇವತೆಗಳು ದೀನರಂತೆ ಮಹರ್ಷಿಯ ಕಡೆಯೇ ನೋಡತೋಡಗಿದರು. ಕಂಗೆಟ್ಟ ಕಣ್ಣುಗಳೊಂದಿಗೆ ಹೇಳಿದರು: “ಮಹರ್ಷಿಗಳೇ ಈಗ ತಾವೇ ಸೂರ್ಯ-ಚಂದ್ರರಾಗಿ ಮೂರೂ ಲೋಕಗಳಲ್ಲೂ ಬೆಳಕು ಚೆಲ್ಲಬೇಕು.”
ದೇವತೆಗಳ ಆರ್ತನಾದವನ್ನು ಕೇಳಿ, ಕನಿಕರಿಸಿದ ಅತ್ರಿಮುನಿ ಚಂದ್ರನ ರೂಪ ತಾಳಿದರು. ತಮ್ಮ ತಪಶ್ಶಕ್ತಿಯಿಂದ ಗಾಯಗೊಂಡು ನಿಶ್ಶಕ್ತರಾಗಿದ್ದ ಸೂರ್ಯ-ಚಂದ್ರರಲ್ಲಿ ಬೆಳಕನ್ನು ತುಂಬಿದರು. ಮೂರೂ ಲೋಕಗಳಲ್ಲಿ ಕವಿದಿದ್ದ ಕತ್ತಲೆಯ ಕಾರ್ಮೋಡವನ್ನು ಚದುರಿಸಿದರು.
ಸ್ವತ: ತಮ್ಮ ತಪೋಬಲದಿಂದ ದಾನವರನ್ನು ಸುಟ್ಟು, ಬೂದಿ ಮಾಡುತ್ತಾ ಬಂದರು, ದೇವತೆಗಳಿಗೂ ಈಗ ಶಕ್ತಿ ವೃದ್ಧಿಸಿತು. ಅವರೂ ಈಗ ಅಸುರರನ್ನು ಹಿಂದಟ್ಟುತ್ತಾ ಹೋದರು.
ದಾನವರೆಲ್ಲರೂ ನಿರ್ಮೂಲನದ ನಂತರ ಅತ್ರಿಮುನಿಗಳು ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ಆಯಾಸದಿಂದ ದಣಿದು ಬಂದಿದ್ದ ಮಹರ್ಷಿಗೆ ಮುದ್ದುಮಗಳು ನಿರ್ಮಲವಾದ ಲೋಟದಲ್ಲಿ ಶುದ್ಧವಾದ ನೀರು ತಂದುಕೊಟ್ಟಳು. ಅದೇ ವೇಳೆಗೆ ತ್ರಿಲೋಕ ಸಂಚಾರಿ ಆದ ನಾರದ ಮಹರ್ಷಿ ಅಲ್ಲಿಗೆ ಬಂದರು. ಅತ್ರಿಮಹರ್ಷಿಯ ಮುದ್ದು ಮಗಳು ಭಯ-ಭಕ್ತಿಯಿಂದ ಅವರ ಪಾದಗಳಿಗೆ ಎರಗಿದಳು.
ಅತ್ರಿಮಹರ್ಷಿಯೂ ನಾರದರಿಗೆ ವಂದಿಸಿ, ಸತ್ಕರಿಸುತ್ತಾ ಹೇಳಿದರು:
“ಮಹರ್ಷಿಗಳೇ, ನನ್ನ ಮಗಳು ಈಗ ವಿವಾಹ ವಯಸ್ಕಳಾಗಿದ್ದಾಳೆ. ನೀವೇ ಎಲ್ಲಾದರೂ ಯೋಗ್ಯ ವರನನ್ನು ಹುಡುಕಿ, ಹೇಳಬಾರದೇ?”
ಹಾಗೆಯೇ ಯೋಚಿಸುತ್ತಾ ನಾರದರು ಹೇಳಿದರು:
“ಮುನಿವರ್ಯರೇ, ರೂಪವತಿಯೂ, ಗುಣವತಿಯೂ ಆದ ನಿಮ್ಮ ಮಗಳಿಗೆ ಯೋಗ್ಯನಾದ ವರ ಅಂದರೆ ಕ್ಷಾತ್ರ ತೇಜಸ್ಸಿನಿಂದ ಕೂಡಿದ ಉತತ್ಥ ಮಹಾಮುನಿ, ಆದರೆ ಅಂತಹ ಸುಯೋಗ್ಯ ವರನನ್ನು ಪಡೆಯಲು ನಿಮ್ಮ ಮಗಳು ಕೆಲಕಾಲ ತಪಸ್ಸು ಮಾಡಬೇಕು.”
ನಾರದರ ನಿರ್ಗಮನದ ನಂತರ ಅತ್ರಿಮಹರ್ಷಿ ಮಗಳೊಂದಿಗೆ ಉತತ್ಥ ಮಹರ್ಷಿಯ ಬಗ್ಗೆ ಪರ್ಯಾಲೋಚಿಸಿದರು. ಅವಳೂ ಸಹ ಒಪ್ಪಿ, ತಪಸ್ಸಿಗೆ ಕುಳಿತಳು.
ನಾರದರು ಉತತ್ಥ ಮಹರ್ಷಿಯ ಬಳಿಗೆ ಬಂದರು, ಗೃಹಸ್ಥಧರ್ಮವನ್ನು ಪರಿಪಾಲಿಸಲು ಉಪದೇಶಿಸಿದರು. ಅತ್ರಿಮಹರ್ಷಿಯ ಮಗಳ ಬಗ್ಗೆಯೂ ತಿಳಿಸಿದರು. ಉತತ್ಥ ಮಹರ್ಷಿಯೂ ನಾರದರ ಮಾತಿಗೆ ಮನ್ನಣೆ ನೀಡಿದರು. ಮದುವೆ ಸಂಭ್ರಮದೊಂದಿಗೆ ನಡೆದು ಹೋಯಿತು. ಅತ್ರಿಮಹರ್ಷಿಯ ಮಗಳನ್ನು ನೀರಿನ ಅಧಿದೇವತೆ ಎನಿಸಿದ ವರುಣ ವರಿಸಲು ಅಪೇಕ್ಷಿಸಿದ್ದ. ಅವನಿಗೆ ವಿಷಯ ತಿಳಿದ ಕೂಡಲೇ ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟೇ ದ್ವೇಷವೂ ಉದ್ಭವಿಸಿತು. ಹೇಗಾದರೂ ಅವಳನ್ನು ತನ್ನ ಲೋಕಕ್ಕೆ ಅಪಹರಿಸಿ, ತರಲು ಬಯಸಿದ. ಕೊನೆಗೊಂದು ದಿನ ಅವಳು ತನ್ನ ಸಖಿಯರೊಂದಿಗೆ ನೀರು ತರಲು ನದಿಯ ತೀರಕ್ಕೆ ಬಂದಿದ್ದಾಗ ಸಮಯ ಸಾಧಿಸಿ ಅಪಹರಿಸಿಕೊಂಡು ಹೋರಟೇಹೋದ. ನಾರದರು ಈ ದೃಶ್ಯವನ್ನು ಕಣ್ಣಾರೆ ಕಂಡುಬಿಟ್ಟರು.
ಅವರು ಕೂಡಲೇ ಉತತ್ಥ ಮಹರ್ಷಿಯ ಬಳಿಗೆ ಹೋಗಿ, ವಿಚಾರವನ್ನು ತಿಳಿಸಿದರು. ಉತತ್ಥ ಮಹರ್ಷಿ ಸ್ವಭಾವತ: ಸಂಯಮಿ ಕೋಪೋದ್ರೇಕದಿಂದ ಮನೋವಿಕಾರಗೊಳಿಸಿಕೊಳ್ಳಲು ಬಯಸುವವನಲ್ಲ. ಮನಸ್ಸನ್ನು ನಿಗ್ರಹಿಸುತ್ತಾ ಹೇಳಿದ: “ನಾರದರೇ, ದಯವಿಟ್ಟು ವರುಣದೇವನ ಬಳಿಗೆ ಹೋಗಿ, ನನ್ನ ಹೆಂಡತಿಯನ್ನು ಹಿಂದಿರುಗಿಸಲು ತಿಳಿಸಿ, ನಾವು ಋಷಿಗಳಾಗಿ ಕೋಪ-ತಾಪಗಳಿಗೆ ಎಡೆ ನೀಡುವುದು ತರವಲ್ಲ, ವರುಣದೇವ ತನ್ನ ತಪ್ಪನ್ನು ತಾನೇ ಅರಿತು ನಡೆದರೆ, ಉಭಯತ್ರರಿಗೂ ಮಂಗಳದಾಯಕವೇ.”
ನಾರದರಿಗೂ ಉತತ್ಥ ಮುನಿಯ ಮಾತು ಹಿಡಿಸಿತು. ವರುಣನ ಬಳಿಗೆ ಹೋಗಿ, ವಿನಮ್ರತೆಯಿಂದಲೇ ವಿಚಾರ ತಿಳಿಸಿದರು. ವರುಣನಿಗೆ ಇನ್ನೂ ರೇಗಿಹೋಯಿತು. ಉತತ್ಥ ಮುನಿಯ ಮಾತಿಗೆ ಮನ್ನಣೆ ನೀಡುವುದಂತಿರಲಿ, ನಾರದರನ್ನೂ ಅಸಡ್ಡೆಯಿಂದಲೇ ಕಂಡ. ನಾರದರೂ ಕುಪಿತರಾಗಲಿಲ್ಲ. ಉತತ್ಥ ಮುನಿಗಳ ಬಳಿಗೆ ಹಿಂದಿರುಗಿ ಬಂದರು. ನಡೆದುದೆಲ್ಲವನ್ನೂ ತಿಳಿಸಿದರು. ದುರಹಂಕಾರಿ ಆದ ವರುಣನಿಂದ ಅವಮಾನ ಆಯಿತಲ್ಲಾ! ಎಂದು ಉತತ್ಥರಿಗೆ ತುಂಬಾ ನೋವಾಯಿತು. ಈಗ ವರುಣದೇವನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂದು ಬಯಸಿದರು. ಉತತ್ಥ ಮಹರ್ಷಿಗಳು ಲೋಕದ ನದಿಗಳ ನೀರನ್ನೆಲ್ಲಾ ತಮ್ಮ ತಪಶ್ಶಕ್ತಿಯಿಂದ ಸ್ವಾಹ ಮಾಡಲು ಪ್ರಾರಂಭಿಸಿದರು. ಲೋಕದ ನೀರಿನ ಭಾಗವೆಲ್ಲಾ ಬತ್ತಿ ಹೋಗಲಾರಂಭಿಸಿತು. ಎಲ್ಲೆಲ್ಲೂ ನೀರಿಗಾಗಿ ಕೂಗೆದ್ದಿತು. ನೀರಿಲ್ಲದೆ ಜನ-ಜಾನುವಾರುಗಳು ಸಾಯತೊಡಗಿದವು. ದೇವತೆಗಳೂ ನೀರಿಗಾಗಿ ಸಂತ್ರಸ್ತರಾದರು. ದೇವತೆಗಳೆಲ್ಲರೂ ವರುಣನ ಬಳಿಗೆ ಬಂದು ಗೋಗರೆದರು:
“ವರುಣದೇವಾ, ಪರನಾರಿಯರನ್ನು ಅಪಹರಿಸಿ, ತರುವುದಕ್ಕಿಂತಲೂ ಮಿಗಿಲಾದ ಪಾಪ ಬೇರೊಂದಿಲ್ಲ. ನೀನು ದಯವಿಟ್ಟು ಆಕೆಯನ್ನು ಮಹರ್ಷಿಯ ಕೈಗೆ ಒಪ್ಪಿಸಿ ಬಾ ಎಂದರು.
ಆದರೆ ವರುಣನ ಅಹಂಕಾರದ ಸೊಕ್ಕು ಇಳಿಯಲಿಲ್ಲ. ಹೇಡಿಯಂತೆ ತನ್ನ ನಗರದ ಮೂಲೆಯಲ್ಲಿ ಹುದುಗಿ ಕುಳಿತ. ಉತತ್ಥ ಮಹರ್ಷಿಗಳು ವರುಣನನ್ನು ಹುಡುಕುತ್ತಾ ಬಂದರು. ಮೂರೂ ಲೋಕಗಳಲ್ಲಿ ಎಲ್ಲಿಯೂ ನೀರೇ ಇಲ್ಲದಂತೆ ಶೋಷಿಸುತ್ತಾ ಬಂದರು. ಈಗ ವರುಣ ವಿಧಿ ಇಲ್ಲದೆ ಶರಣಾಗಬೇಕಾಯಿತು. ಪ್ರಾಣಕ್ಕೆ ಸಂಚು ಉಂಟಾಗುತ್ತಿರುವುದನ್ನು ಕಂಡು, ಭಯದಿಂದ ಏದುಸಿರು ಬಿಡುತ್ತಾ ಬಂದ ವರುಣ ಉತತ್ಥ ಮಹರ್ಷಿಗಳ ಪಾದಗಳ ಮೇಲೆ ಬಿದ್ದು ಪ್ರಾರ್ಥಿಸಿದ:
“ಮಹರ್ಷಿಗಳೇ, ನಿಮ್ಮಲ್ಲಿ ಶರಣಾಗಿ ಬಂದಿರುವ ನನ್ನನ್ನು ಕಾಪಾಡಿ. ನನ್ನ ಮನೋವಿಕಾರತೆಯೇ ನನ್ನನ್ನು ಈ ಹೀನಸ್ಥಿತಿಗೆ ತಂದಿತ್ತು” ಅನ್ನುತ್ತಾ ಅವರ ಪತ್ನಿಯನ್ನು ಭಕ್ತಿಯಿಂದ ಅವರಿಗೇ ಒಪ್ಪಿಸಿದ.
ಉತತ್ಥ ಮಹರ್ಷಿಗಳಿಗೂ ಈಗ ಮನಸ್ಸಮಾಧಾನ ಆಯಿತು. ವರುಣನನ್ನು ತನ್ನ ಮಗನಂತೆ ಮೇಲೆತ್ತಿ ಲಗುಬಗೆಯಿಂದಲೇ ಹೇಳಿದರು:
“ವರುಣಾ, ಶರಣಾಗತರಾದವರನ್ನು ರಕ್ಷಿಸುವುದು ನಮ್ಮಂತಹ ಕ್ಷಾತ್ರವೀರರ ಕರ್ತವ್ಯ. ನಾನು ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ಲೋಕಕ್ಕೆ ಹೋಗು”
ಅನ್ನುತ್ತಿದ್ದಂತೆ ಎಲ್ಲೆಲ್ಲೂ ಮತ್ತೆ ನೀರು ತುಂಬಿ ಹರಿಯಿತು. ಜನರೆಲ್ಲರ ಹಾಹಾಕಾರ ಅಡಗಿತು.

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys