ಮಹಾಭಾರತ ಕಥೆಗಳು

ಬಕಾಸುರ ವಧೆ ತಮ್ಮ ವನವಾಸದ ವೇಳೆಯಲ್ಲಿ ಪಾಂಡವರು ಪಾಂಚಾಲ ದೇಶದ ರಾಜಧಾನಿಯ ಹೊರಭಾಗದಲ್ಲಿ ಒಬ್ಬ ಕುಂಬಾರನ ಮನೆಯಲ್ಲಿ ತಂಗಿದ್ದರು. ಆಗ ಹಗಲಿನ ವೇಳೆ ಕುಂತಿ ದೇವಿಯ ಜೊತೆಗೆ ಭೀಮನು ಮಾತ್ರ ಮನೆಯಲ್ಲಿದ್ದನು. ಉಳಿದ ಸಹೋದರರು ಬ್ರಾಹ್ಮಣ ವೇಷದಲ್ಲಿ ನಗರದಲ್ಲಿ ಭಿಕ್ಷೆಗಾಗಿ ಹೋಗಿದ್ದರು. ಆಗ ಅವರಿದ್ದ ಮನೆಯ ಪಕ್ಕದ ಮನೆಯಿಂದ ಜೋರಾಗಿ ಅಳುವ ಶಬ್ದವು ಕೇಳಿಸಿತು. ಇದನ್ನು ಕೇಳಿದ ಕುಂತಿ ದೇವಿಯು ಭೀಮನನ್ನು ಕುರಿತು ‘ಪುತ್ರನೇ, ಪಕ್ಕದಲ್ಲಿರುವ ಬ್ರಾಹ್ಮಣರ ಮನೆಯಿಂದ ಅಳುವ ಧ್ವನಿ ಕೇಳಿಸುತ್ತಿದೆ. ಅದೇನೆಂದು ನೋಡಿ ಬರುತ್ತೇನೆ’ ಎಂದು ಹೇಳಿ ಪಕ್ಕದ ಮನೆಗೆ ಹೋದಳು. ಅಲ್ಲಿ ಆ ಬ್ರಾಹ್ಮಣರೂ ಅವರ ಮನೆಯವರೂ ಬಿಕ್ಕಿ ಬಿಕ್ಕಿ ಅಳುವುದನ್ನು ಕಂಡು ಕುಂತಿಯ ಮನಸ್ಸು ಕರಗಿತು. ಅವರನ್ನು ನೋಡಿ ‘ಅಯ್ಯಾ, ಬಹಳ ಹೊತ್ತಿನಿಂದ ನೀವೆಲ್ಲರೂ ಅಳುತ್ತಲೇ ಇರುವಿರಲ್ಲ. ಏನು ಕಾರಣ’ ಎಂದು ಕೇಳಿದಳು.

ಆಗ ಕಣ್ಣೀರನ್ನು ಒರೆಸಿಕೊಂಡು ಸ್ವಲ್ಪ ಸಮಾಧಾನ ಮಾಡಿಕೊಂಡು ಆ ಬ್ರಾಹ್ಮಣನು ‘ತಾಯಿ, ನನ್ನ ಕುಟುಂಬಕ್ಕೆ ದೊಡ್ಡ ಆಪತ್ತು ಒದಗಿಬಿಟ್ಟಿದೆ. ಇವರೆಲ್ಲರನ್ನೂ ಕಾಪಾಡುವವರು ಯಾರು? ಎಂದು ಹೇಳಿ ಮತ್ತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದನು. ಆಗ ಕುಂತಿಯು, ‘ಅಯ್ಯಾ ದುಃಖ ಪಡದಿರಿ? ಏನು ನಡೆಯಿತೆಂದು ತಿಳಿಸಿರಿ? ಎಂದಳು. ಆಗ ಅಳುತ್ತಲೇ ಆ ಬ್ರಾಹ್ಮಣನು ‘ತಾಯಿ, ಈ ನಗರದಲ್ಲಿನ ಗಡಿಯಲ್ಲಿ ಒಂದು ದಟ್ಟವಾದ ಕಾಡಿದೆ. ಅಲ್ಲಿ ಬಕಾಸುರನೆಂಬ ಭಯಂಕರವಾದ ರಾಕ್ಷಸನೂ ಅವನ ಅನುಚರರೂ ಇದ್ದಾರೆ’ ಎಂದನು. ಆ ವೇಳೆಗೆ ಭೀಮನೂ ಅಲ್ಲಿಗೆ ಬಂದನು. ‘ಅಯ್ಯಾ, ಈ ದೇಶದಲ್ಲಿ ರಾಜನೇ ಇಲ್ಲವಾ?’ ಎಂದು ಕೇಳಿದನು.

ಆಗ ಬ್ರಾಹ್ಮಣನು ‘ರಾಜನು ಇದ್ದೂ ಇಲ್ಲದಂತಾಗಿದೆ. ಅವನು ಶೌರ್ಯವೇ ಇಲ್ಲದ ಹೇಡಿ. ಸೋಮಾರಿಯಾದ ಅವನು ದುಷ್ಟ ಶಕ್ತಿಗಳ ದಾಸನಾಗಿ ಬಕಾಸುರನನ್ನೂ ಅವನ ಅನುಚರರನ್ನೂ ಈ ನಗರಕ್ಕೆ ಕಾವಲಿಟ್ಟನು. ಆದ್ದರಿಂದ ಶತ್ರುಗಳು ಯುದ್ಧಕ್ಕೆ ಬರುವುದಿಲ್ಲ. ಆದರೆ, ತನ್ನ ದೇಶದ ಪ್ರಜೆಗಳನ್ನು ಆ ಬಕಾಸುರನಿಗೆ ಬಲಿಕೊಟ್ಟುಬಿಟ್ಟ. ಪ್ರತಿ ದಿನವೂ ಸೂರ್ಯೋದಯದ ವೇಳೆಯಲ್ಲಿ ಒಂದು ಬಂಡಿ ಅನ್ನ, ಎರಡು ಎಮ್ಮೆಗಳು, ಒಬ್ಬ ಮನುಷ್ಯನನ್ನು ಅವನಿಗೆ ಆಹಾರವಾಗಿ ಪ್ರಜೆಗಳು ಕಳುಹಿಸಬೇಕು’ ಎಂದನು. ಇದನ್ನು ಕೇಳಿ ಕೆರಳಿದ ಭೀಮನು ‘ಕಳುಹಿಸದಿದ್ದರೆ’ ಎಂದು ಕೇಳಿದನು. ಕಳುಹಿಸದಿದ್ದರೆ ಬಕಾಸುರನ ಅನುಚರರು ಈ ನಗರವನ್ನೇ ಧ್ವಂಸ ಮಾಡಿ ಬಿಡುತ್ತಾರೆ’ ಇಲ್ಲಿ ಸರದಿಯ ಪ್ರಕಾರ ಒಂದೊಂದು ಮನೆಯಿಂದ ಒಂದೊಂದು ದಿನ ಒಬ್ಬ ಮನುಷ್ಯನನ್ನು ಬಲಿಯಾಗಿ ಕಳುಹಿಸಬೇಕು. ನಾಳೆ ನನ್ನ ಮನೆಯಿಂದ ಒಬ್ಬರನ್ನು ಕಳಿಸಲೇ ಬೇಕು.

‘ನನ್ನ ಕುಟುಂಬವನ್ನು ನಿರಾಧಾರವಾಗಿ ಬಿಟ್ಟು ಹೋಗಬೇಕಲ್ಲ, ಏನು ಮಾಡುವುದು’ ಎಂದು ಹೇಳಿ ಅಳುವುದಕ್ಕೆ ಪ್ರಾರಂಭಿಸಿದನು. ಆ ಬ್ರಾಹ್ಮಣನ ಚಿಕ್ಕ ಮಗ ‘ನಾನು ಹೋಗಿ ಆ ಅಸುರನನ್ನು ಕೊಂದು ಹಾಕಿ ಬರುತ್ತೇನೆ. ನೀವು ಅಳಬೇಡಿ ಅಪ್ಪಾ’ ಎಂದು ಮುದ್ದಾಗಿ ಹೇಳಿದನು. ಆಗ ಭೀಮನು ಆ ಪುಟ್ಟ ಹುಡುಗನನ್ನು ಅಪ್ಪಿಕೊಂಡನು. ಭೀಮನು ಅತ್ಯಂತ ಬಲಶಾಲಿಯಾದರೂ ಬೇರೆಯವರ ದುಃಖವನ್ನು ಕಂಡು ಕರುಣೆಯಿಂದ ಕರಗುವವನು. ಸಾವಿರಾರು ಪ್ರಜೆಗಳು ಒಂದಾಗಿ ಕೂಡಿ ಆ ಅಸುರನನ್ನು ಕೊಲ್ಲದೇ ಇದ್ದಾರಲ್ಲಾ ಎಂದು ವ್ಯಥೆಪಟ್ಟನು. ಆಗ ಕುಂತಿ ದೇವಿ ‘ಬ್ರಾಹ್ಮಣರೇ, ದುಃಖ ಪಡಬೇಡಿರಿ. ನನಗೆ ಐದು ಜನ ವೀರ ಪುತ್ರರಿದ್ದಾರೆ. ಅವರೆಲ್ಲ ಅತಿ ಶ್ರೇಷ್ಠ ಬಿಲ್ಲುಗಾರರು. ಇದೋ ಈಗ ನಿಮ್ಮೆದುರಿಗೆ ಇರುವ ಈ ಭೀಮನನ್ನು ಯಾರೂ ಗೆಲ್ಲಲಾರರು. ನಾಳೆ ನಿಮಗೆ ಬದಲಾಗಿ ಸೂರ್ಯೋದಯದಲ್ಲಿ ನನ್ನ ಮಗನಾದ ಈ ಭೀಮನು ಹೋಗಿ ಆ ಬಕಾಸುರನನ್ನು ಕೊಲ್ಲುತ್ತಾನೆ. ನಿಮಗೆ ಚಿಂತೆ ಬೇಡ’ ಎಂದು ಸಮಾಧಾನಪಡಿಸಿದಳು. ಮಹಾ ಪಾಪಿಯಾದ ಬಕಾಸುರನನ್ನು ಕೊಲ್ಲಲು ಭೀಮನ ತೋಳುಗಳು ಆತುರಗೊಂಡವು. ಮಾರನೆಯ ದಿನ ಬೆಳಿಗ್ಗೆ ಭೀಮನು ಹೊರಟನು. ಅವನೊಡನೆ ಒಂದು ಬಂಡಿ ತುಂಬ ಅನ್ನ, ಹಣ್ಣುಗಳು, ಎರಡು ಎಮ್ಮೆಗಳು ಕಳುಹಿಸಲ್ಪಟ್ಟವು. ಬಕಾಸುರನ ಬಳಿಗೆ ಭೀಮನು ಬೇಕೆಂದೇ ತಡವಾಗಿ ಹೋದನು.

ಬೆಳಿಗ್ಗೆಯೇ ತನಗೆ ಬರಬೇಕಾಗಿದ್ದ ಆಹಾರವನ್ನು ಮಧ್ಯಾಹ್ನವಾದರೂ ಬರದೇ ಇದ್ದುದರಿಂದ ಬಕಾಸುರನಿಗೆ ಅಪಾರವಾದ ಕೋಪ ಬಂದಿತ್ತು. ಆಗ ಭೀಮನು ಅವನ ಬಳಿಗೆ ಹೋದನು. ‘ಬಕಾಸುರಾ’ ಎಂದು ಜೋರಾಗಿ ಕೂಗಿದನು. ಮೊದಲೇ ಕೋಪಗೊಂಡಿದ್ದ ಬಕಾಸುರನಿಗೆ ತನ್ನನ್ನು ಒಬ್ಬ ಸಾಮಾನ್ಯ ಮನುಷ್ಯ ಹೆಸರು ಹಿಡಿದು ಕರೆದಾಗ ತೀವ್ರವಾದ ಆವೇಶವೂ ಉಂಟಾಗಿ ಕರ್ಕಶವಾಗಿ ಗರ್ಜಿಸುತ್ತಾ ಓಡಿ ಬಂದನು. ಅವನ ಭಯಂಕರವಾದ ರೂಪ, ಬೆಂಕಿಯಂತೆ ಉರಿಯುವ ಕೆಂಪಾದ ಕಣ್ಣುಗಳು, ಕತ್ತಿನವರೆಗೆ ಇಳಿ ಬಿದ್ದಿದ್ದ ದೊಡ್ಡ ಕಿವಿಗಳು, ಕೆಂಪಾಗಿ ಜೊಂಪೆ ಜೊಂಪೆಯಾಗಿ ನೇತಾಡುತ್ತಿದ್ದ ತಲೆ ಕೂದಲುಗಳೂ ಭಯ ಹುಟ್ಟಿಸುವ ಕೋರೆ ಹಲ್ಲುಗಳೂ, ಚೂಪಾದ ಉಗುರಗಳೂ ನೋಡುವವರಿಗೆ ಅತ್ಯಂತ ಭಯವನ್ನೂ, ನಡುಕವನ್ನೂ ಹುಟ್ಟಿಸುವಂತಿದ್ದವು. ಭೀಮನ ಮೇಲೇ ಬೀಳುವಂತೆ ಆ ಬಕಾಸುರನು ಬಂದನು. ಏನನ್ನೂ ನೋಡದವನಂತೆ ಭೀಮನು ನಿಧಾನವಾಗಿ ಎಲ್ಲ ಅನ್ನವನ್ನೂ ಚೆನ್ನಾಗಿ ಕಲಸಿ ಕಲಸಿ ದಪ್ಪ ದಪ್ಪ ಉಂಡೆಗಳನ್ನಾಗಿ ಮಾಡಿ ನುಂಗುತ್ತಿದ್ದನು. ಇದನ್ನು ನೋಡಿ ಬಕಾಸುರನಿಗೆ ಕೋಪದಿಂದ ಹುಚ್ಚೇ ಹಿಡಿಯಿತು. ಆಗ ಅವನು ‘ಎಲವೋ ನರನೇ’ ಸಿಂಹದ ಗುಹೆಯಲ್ಲಿ ಸುಂಡಿಲಯಂತೆ ನೀನು ಯಾರು? ನಿನ್ನನ್ನು ಏನು ಮಾಡುತ್ತೇನೆ ನೋಡು? ಎನ್ನುತ್ತಾ ಭೀಮನ ಸಮೀಪಕ್ಕೆ ಬಂದನು. ಆಗಲೂ ಭೀಮನು ಮೌನವಾಗಿದ್ದನು. ಆಗ ಬಕಾಸುರನು ಭೀಮನ ಮೈಮೇಲೆ ಎರಗಿದನು. ಅವನನ್ನು ಎಡಗೈಯಿಂದ ಭೀಮನು ತಳ್ಳಿದಾಗ ಬಕಾಸುರ ಉರುಳಿ ಬಿದ್ದನು. ಎದ್ದು ಬಂದು ಆ ಅಸುರನು ಭೀಮನನ್ನು ಗುದ್ದುವುದಕ್ಕೆ ಬಂದನು. ಇದಾವುದಕ್ಕೂ ಅಂಜದೆ ಭೀಮನು ಪೂರ್ತಿಯಾಗಿ ಒಂದು ಬಂಡಿ ಅನ್ನವನ್ನೂ ಚೆನ್ನಾಗಿ ಉಂಡು ಮುಗಿಸಿ ಗಟಾರ್ ಎಂದು ದೊಡ್ಡದಾಗಿ ತೇಗಿದನು.

ಬೆಟ್ಟಗಳಂತೆ ಕಾಣುತ್ತಿದ್ದ ಇಬ್ಬರೂ ಘೋರವಾಗಿ ಹೋರಾಡಿದರು. ಮದಿಸಿದ ಆನೆಗಳಂತೆ ಒಬ್ಬರೊಡನೆ ಒಬ್ಬರು ಸೆಣಸಿದರು. ದೊಡ್ಡ ದೊಡ್ಡ ಮರಗಳನ್ನು ಕಿತ್ತು ಹೊಡೆದಾಡಿದರು. ಸಂಜೆಯಾಗುವವರೆಗೂ ಇವರ ಯುದ್ಧ ನಡೆಯಿತು. ಬಕಾಸುರನು ತೀವ್ರವಾಗಿ ಆಯಾಸಗೊಂಡು ಕೆಳಗೆ ಉರುಳಿದನು. ಭೀಮನು ಅವನನ್ನು ಚೆನ್ನಾಗಿ ಗುದ್ದಿ ಗದೆಯಿಂದ ಬಡಿದು ಎರಡು ಭಾಗ ಮಾಡಿ ಊರೊಳೊಗೆ ಹೊತ್ತುಕೊಂಡು ಬಂದನು. ಭೀಮನನ್ನು ಕಾಣಲು ಕಾತುರಗೊಂಡಿದ್ದ ಕುಂತಿದೇವಿಯೂ, ಸಹೋದರರೂ, ಊರಿನವರೆಲ್ಲರೂ ಬಕಾಸುರನನ್ನು ಕೊಂದು ಹೊತ್ತುಕೊಂಡು ಬರುವುದನ್ನು ಕಂಡರು. ಅವರಿಗೆ ಲೋಕವೆಲ್ಲಾ ಹಿಡಿಸಲಾರದಷ್ಟು ಆನಂದವಾಯಿತು. ಬ್ರಾಹ್ಮಣನೂ, ಉಳಿದವರೂ ಭೀಮನ ಪರಾಕ್ರಮವನ್ನು ಹಾಡಿ ಕೊಂಡಾಡಿದರು. ಆ ನಗರದ ಜನರ ಭಯವನ್ನು ಹೋಗಲಾಡಿಸಲು ಬಕಾಸುರನ ಶವವನ್ನು ನಗರದ ಹೆಬ್ಬಾಗಿಲಿಗೆ ಭೀಮನು ನೇತು ಹಾಕಿದನು. ನರಬಲಿಕೊಡುವುದನ್ನು ತಪ್ಪಿಸಿದ ಭೀಮನನ್ನು ಸಂತೋಷದಿಂದ ಕಣ್ಣೀರಿಡುತ್ತಾ ಹಾಡಿ ಹಾರೈಸಿದರು.

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys